ನಿವೃತ್ತಿನಾಥ -
	1273-1297. ಮರಾಠೀ ಸಾಹಿತ್ಯದ ಒಬ್ಬ ಶ್ರೇಷ್ಠ ಸಂತ ಕವಿ. ಜ್ಞಾನೇಶ್ವರನ ಸಹೋದರ ಮತ್ತು ಗುರು. ಈತನ ಜನ್ಮಸ್ಥಳ, ಪ್ಶೆಠಣದ ಬಳಿಯಲ್ಲಿ ಗೋದಾವರೀ ತೀರದಲ್ಲಿರುವ ಆಪೆಗಾಂವ್. ಪೂರ್ವಜರು ಆಪೆಗಾಂವದ ಕುಲಕರ್ಣಿಗಳು. ತಂದೆ ವಿಠ್ಠಲ ಪಂತ, ತಾಯಿ ರಖುಮಾ (ರುಕ್ಮಿಣಿ) ಬಾಯಿ. ಜ್ಞಾನೇಶ್ವರ ಹಾಗೂ ಸೋಪಾನರು ಸೋದರರು, ಮುಕ್ತಾಬಾಯಿ ಸೋದರಿ. ಈ ನಾಲ್ವರೂ ಮಹಾರಾಷ್ಟ್ರದ ಪ್ರಾಚೀನ ಶ್ರೇಷ್ಠ ಸಂತರು. ನಿವೃತ್ತಿನಾಥ ನಾಥಪಂಥದ ಅನುಯಾಯಿ. ಮತ್ಸ್ಯೇಂದ್ರನಾಥ ಗೋರಖನಾಥ ಗಹಿನಿನಾಥ ನಿವೃತ್ತಿನಾಥ-ಇದು ಇವನ ಪರಂಪರೆ. ಜ್ಞಾನದೇವ ಜ್ಞಾನೇಶ್ವರಿ ಗ್ರಂಥದಲ್ಲಿ ತನ್ನದೂ ಇದೇ ಗುರು ಪರಂಪರೆಯೆಂದು ತಿಳಿಸಿದ್ದಾನೆ.

	ನಿವೃತ್ತಿನಾಥನ ಬಾಲ್ಯ ಹಾಗೂ ಅನಂತರದ ಬೆಳೆವಣಿಗೆ ರೋಚಕವಾಗಿದೆ. ತಂದೆ ವಿಠ್ಠಲ ಪಂತ ಸಂನ್ಯಾಸಿಯಾಗಿದ್ದು ಗುರುವಿನ ಆಜ್ಞೆಯ ಮೇರೆಗೆ ಪುನಃ ಸಂಸಾರಿಯಾಗಿ ನಾಲ್ವರು ಮಕ್ಕಳ ತಂದೆಯಾಗುತ್ತಾನೆ. ಅವನ ಜೀವನ ರೀತಿಯನ್ನು ಒಪ್ಪದ ಜನತೆ ಅವನಿಗೆ ಬಹಿಷ್ಕಾರ ಹಾಕುತ್ತದೆ. ಆಗ ಆತ ಹೆಂಡತಿಯೊಡನೆ ನಾಸಿಕದ ಬಳಿಯ ತ್ರ್ಯಂಬಕೇಶ್ವರಕ್ಕೆ ಬರುತ್ತಾನೆ. ಅಲ್ಲಿ ದಂಪತಿಗಳು ತಮ್ಮ ಜೀವನವನ್ನು ಪವಿತ್ರಗೊಳಿಸಿಕೊಳ್ಳಲು ಬ್ರಹ್ಮಗಿರಿಗೆ ನಿತ್ಯ ಪ್ರದಕ್ಷಿಣೆಯನ್ನು ಹಾಕುತ್ತಿರುತ್ತಾರೆ. ಒಂದು ದಿನ ಪ್ರದಕ್ಷಿಣೆ ಹಾಕುತ್ತಿರುವಾಗ ಹುಲಿಯೊಂದು ಹಾರಿ ಬರುತ್ತದೆ. ಹುಡುಗರು ಮನಸ್ಸಿಗೆ ಬಂದತ್ತ ಓಡಿಹೋಗುತ್ತಾರೆ. ನಿವೃತ್ತಿನಾಥ ಒಂದು ಗುಹೆಯೊಳಗೆ ಹೋಗಿ ಅಡಗಿಕೊಳ್ಳುತ್ತಾರೆ. ವಿಠ್ಠಲಪಂತ ದೊರಕಿದ ಇತರ ಮೂವರೇ ಮಕ್ಕಳನ್ನು ಕರೆದುಕೊಂಡು ಹಿಂದಕ್ಕೆ ಮರಳುತ್ತಾನೆ. ಆ ಗುಹೆಯಲ್ಲಿಯೆ ನಿವೃತ್ತಿನಾಥನಿಗೆ ಗಹಿನಿನಾಥನ ದರ್ಶನವಾಗುತ್ತದೆ. ಯೋಗ್ಯ ಶಿಷ್ಯ ದೊರೆತನೆಂದು ಸಂತೋಷಪಟ್ಟು ಗಹಿನಿನಾಥ ತಾನು ಗಳಿಸಿದ ಅನುಭವಜ್ಞಾನವನ್ನು ಆತನಿಗೆ ಬೋಧಿಸುತ್ತಾನೆ. ಅನಂತರ ನಿವೃತ್ತಿನಾಥ ಹಿಂತಿರುಗಿ ಬಂದು ತನ್ನ ಬಂಧುಗಳನ್ನು ಸೇರಿಕೊಳ್ಳುತ್ತಾನೆ. ಪ್ರಾಯಃ ತಂದೆಯ ಮರಣಾನಂತರ ತಮ್ಮನಾದ ಜ್ಞಾನೇಶ್ವರನಿಗೆ ನಿವೃತ್ತಿನಾಥನೇ ಗುರುಬೋಧೆಯನ್ನು ಕೊಟ್ಟಿರಬೇಕು. ಜ್ಞಾನೇಶ್ವರೀ ಗ್ರಂಥದಿಂದ ಈ ವಿಷಯ ಸ್ಪಷ್ಟಪಡುತ್ತದೆ. ಜ್ಞಾನೇಶ್ವರಿಯನ್ನು ಕೇಳಿದ ಮೇಲೆ ನಿವೃತ್ತಿನಾಥ ಅದಕ್ಕೂ ವಿಸ್ತಾರವಾದ ಸ್ವತಂತ್ರ ಗ್ರಂಥವೊಂದನ್ನು ಬರೆಯಲು ಜ್ಞಾನದೇವನಿಗೆ ಹೇಳಲು ಆತ ಅಮೃತಾನುಭವ ಗ್ರಂಥವನ್ನು ಬರೆದುದಾಗಿ ಕೆಲವರ ನಂಬಿಕೆ. ಜ್ಞಾನದೇವ ನಿವೃತ್ತಿನಾಥನನ್ನು ಗುರುವೆಂದು ಬಹುಪೂಜ್ಯತೆಯಿಂದ ಕಂಡಿದ್ದಾನೆ; ಅವನನ್ನು ಸತ್ಯಸೂರ್ಯನೆಂದೂ ಪರಮಪರಾತ್ಪರನೆಂದೂ ವರ್ಣಿಸಿದ್ದಾನೆ. ಅಮೃತಾನುಭವ ಗ್ರಂಥದ ಎರಡನೆಯ ಅಧ್ಯಾಯದಲ್ಲಿ ಆತ ಗುರು ನಿವೃತ್ತಿನಾಥನ ವರ್ಣನೆಯನ್ನು ವಿಶೇಷವಾಗಿ ಮಾಡಿದ್ದಾನೆ.

	ಮರಾಠೀ ಸಾಹಿತ್ಯದಲ್ಲಿನ ಅಭಂಗ ಸಾಹಿತ್ಯ ಪ್ರಕಾರದ ಆದ್ಯಪ್ರವರ್ತಕರಲ್ಲಿ ನಿವೃತ್ತಿನಾಥನೂ ಒಬ್ಬ. ಇವನ ಅಭಂಗಗಳ ಧೋರಣೆ ಇದು: ಜೀವನ ಒಂದು ವೃಕ್ಷವಿದ್ದಂತೆ. ಅದು ಭೂಮಿಯಲ್ಲಿ ಇರಲು ಆಶಿಸುತ್ತದೆ. ಇದ್ದಷ್ಟೂ ಇರುವಿಕೆಯ ಬೇರು ಆಳಕ್ಕೆ ಇಳಿಯುತ್ತದೆ. ಈ ಆಶೆಯ ಮೂಲವನ್ನು ಇತ್ತೊಗೆಯಲು, ಸರ್ವತ್ರ ಚೇತನರೂಪಿಯಾದ ಆತ್ಮನನ್ನು ಅರಿಯಲು ಗುರುಕರುಣೆಯಿಂದ ಮಾತ್ರ ಸಾಧ್ಯ. ಯಾರು ನಮಗೆ ನೇರವಾಗಿ ದೇವರನ್ನು ತೋರಿಸಬಲ್ಲರೋ ಅನುಭವಕ್ಕೆ ತಂದುಕೊಡಬಲ್ಲರೋ ಅವರೇ ನಿಜವಾದ ಗುರುಗಳೂ. ಅಂಥವರಿಗೆ ಭಕ್ತ ತನ್ನ ತನುಮನಧನಗಳೆಲ್ಲವನ್ನೂ ಅರ್ಪಿಸಬೇಕು. ದೇವರು, ಸದ್ಭಾವನೆ ಹಾಗೂ ಸದಿಚ್ಛೆಗಳನ್ನುಳ್ಳ ಭಕ್ತನಿಗೆ ಮಾತ್ರ ದರ್ಶನವೀಯುತ್ತಾನೆ. ಯಾರ ಹೊಗಳಿಕೆಗಾಗಲಿ ತೆಗಳಿಕೆಗಾಗಲಿ ಭಕ್ತ ಒಳಗಾಗಬಾರದು. ನಿರ್ಲಿಪ್ತಮನೋಭಾವದಿಂದ ಪರಮಾತ್ಮನ ಧ್ಯಾನದಲ್ಲಿ ಲೀನನಾಗಬೇಕು. ಆ ಪರಮಾತ್ಮನೆಂಬ ಪರಿಮಳ ಗಂಧದ ಮರದ ಗಂಧಕ್ಕಿಂತಲೂ ಗಂಧಿತ, ಜಾಜಿ ಮಲ್ಲಿಗೆಗಳ ಸುವಾಸನೆಗಿಂತಲೂ ಸುವಾಸಿತ, ಅದರ ಆಮೋದ ತುಲನಾತೀತ. ಭಗವಂತ ಸಮುದ್ರವಾದರೆ ಭಕ್ತ ಅದರ ಅಲೆ ಇದ್ದಂತೆ. ಬ್ರಹ್ಮದ ಅಂತ ತಿಳಿಯದು, ರೂಪ ಹೊಳೆಯದು, ಮಾತಿನಲ್ಲಿ ಮೂಡಿ ಮುಗಿವುದೇ! ಒಮ್ಮೆ ವಿಠ್ಠಲ ಎಂದರೆ, ವೈಕುಂಠ (ಭೂಮಿಗೆ) ಇಳಿದು ಬರುವುದು. ಶಾ.ಶ.1219 ಜೇಷ್ಠ ಬಹುಳ ದ್ವಾದಶಿ ತಿಥಿಯಂದು ತ್ರ್ಯಂಬಕೇಶ್ವರದಲ್ಲಿ ನಿವೃತ್ತಿನಾಥ ಜೀವತ ಸಮಾಧಿಯನ್ನು ಹೊಂದಿದ. ಪ್ರತಿವರ್ಷ ಆ ಪುಣ್ಯತಿಥಿಯಂದು ಅಲ್ಲಿ ಇಂದಿಗೂ ಜಾತ್ರೆ ಸೇರುತ್ತದೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ